ಪೊಲೀಸರ ಕಣ್ಣು ತಪ್ಪಿಸಿದ ವಿಚಾರಣಾಧೀನ ಕೈದಿ
ಕಾಲಿಗೆ ಸರಪಳಿ ಹಾಕಿದ್ರು ಕುಂಟಿಕೊಂಡು ಎಸ್ಕೇಪ್
ಹೋಟೆಲ್ ಮಹಡಿಯಿಂದ ಇಳಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ವಿಚಾರಣಾಧೀನ ಕೈದಿಯೊಬ್ಬ ಪೊಲೀಸರ ಕೈಯಿಂದ ತಪ್ಪಿಸಿಕೊಂಡ ದೃಶ್ಯ ಸಮೇತ ಘಟನೆ ಬೆಳಕಿಗೆ ಬಂದಿದೆ. ಒಡಿಶಾದ ಗಜಪತಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಮಾದಕ ದ್ರವ್ಯ ಕಳ್ಳಸಾಗಣೆ ಪ್ರಕರಣ ಸಂಬಂಧ ಜುಯಲ್ ಸಬರ್ ಎಂಬ ವಿಚಾರಣಾಧೀನ ಕೈದಿಯನ್ನು ಬಂಧಿಸಲಾಗಿತ್ತು. ಆತ ತಪ್ಪಿಸಿಕೊಳ್ಳುತ್ತಾನೆಂಬ ಕಾರಣಕ್ಕೆ ಕಾಲಿಗೆ ಸರಪಳಿಯನ್ನು ಹಾಕಲಾಗಿತ್ತು. ಆದರೆ ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದು ಹೋಟೆಲ್ನಲ್ಲಿ ತಂಗಿದ್ದಾಗ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾನೆ.
ಜುಯಲ್ ಸಬರ್ ಮಹಾರಾಷ್ಟ್ರದಲ್ಲಿ ಮಾದಕ ದ್ರವ್ಯ ವಸ್ತುಗಳನ್ನು ಕಳ್ಳಸಾಗಣಿಕೆ ಮಾಡುತ್ತಿದ್ದ ಎಂಬ ಕಾರಣಕ್ಕೆ ರೈಲ್ವೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತನಿಖೆಗೆ ಒಳಪಡಿಸಿದಾಗ ಅತ್ಯಾಚಾರ ಪ್ರಕರಣದಲ್ಲೂ ಈತ ಭಾಗಿಯಾಗಿದ್ದ ಎಂಬುದನ್ನು ಪೊಲೀಸರು ಕಂಡುಕೊಂಡಿದ್ದರು. ಹೀಗಾಗಿ ನವೆಂಬರ್ 2 ರಂದು ನ್ಯಾಯಾಲಯ ವಿಚಾರಣೆಗಾಗಿ ಗಜಪತಿಗೆ ಕರೆದುಕೊಂಡು ಬರಲಾಗಿತ್ತು.
ಜುಯಲ್ನನ್ನು ನಾಗ್ಪುರದಿಂದ ಗಜಪತಿಗೆ ಕರೆದುಕೊಂಡು ಬಂದ ಪೊಲೀಸರು ಅಂದು ಹೋಟೆಲ್ನಲ್ಲಿ ತಂಗಿದ್ದರು. ಜುಯೆಲ್ ತಪ್ಪಿಸಿಕೊಳ್ಳುತ್ತಾನೆ ಎಂಬ ಕಾರಣಕ್ಕೆ ಆತನ ಕಾಲಿಗೆ ಸರಪಳಿ ಹಾಕಿದ್ದರು. ಆದರೆ ಪೊಲೀಸರ ಕಣ್ಣು ತಪ್ಪಿಸಿ ನಿಧಾನವಾಗಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ದೃಶ್ಯ ಹೋಟೆಲ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಪೊಲೀಸರು ಜುಯಲ್ನನ್ನು ಹುಡುಕುತ್ತಿದ್ದಾರೆ. ಅದಕ್ಕಾಗಿ ವಿಶೇಷ ತಂಡ ರಚಿಸಿದ್ದಾರೆ.