ಈ ವರ್ಷ ಇಡೀ ದೇಶದಲ್ಲಿ ನಡೆಯುತ್ತಿವೆ ಒಟ್ಟು 48 ಲಕ್ಷ ಜೋಡಿಯ ಮದುವೆ
ಈ ಮದುವೆಗಳಿಂದ ರಿಟೇಲ್, ಸರಕು ಮತ್ತು ಸೇವೆಗಳ ಆದಾಯ ಎಷ್ಟಾಗಲಿದೆ?
ಭಾರತೀಯ ಕೈಗಾರಿಕಾ ಒಕ್ಕೂಟ ನಡೆಸಿರು ಅಧ್ಯಯನದಲ್ಲಿ ಇರುವುದು ಏನು
ಭಾರತದಲ್ಲಿ ಮದುವೆ ಅಂದ್ರೆ ಅದು ಒಂದು ಹಬ್ಬಕ್ಕೆ ಸಮವಾಗಿ ಸಂಭ್ರಮಿಸಲಾಗುತ್ತದೆ. ಹೊಸ ಜೀವನಕ್ಕೆ ಕಾಲಿಡುವ ವಧು ವರರನ್ನು ಎಲ್ಲ ರೀತಿಯ ಸಂಪ್ರದಾಯಗಳನ್ನು ನೇರವೇರಿಸಿ. ಹೊಸ ಬದುಕಿಗೆ ಕಾಲಿಟ್ಟ ನಿಮಗೆ ಶುಭಾವಾಗಲಿ ಎಂದು ಮಂತ್ರಘೋಷಗಳ ಮೂಲಕ, ಹಿರಿಯರ ಆಶೀರ್ವಾದದ ಮೂಲಕ ಹರಸಿ ಹಾರೈಸಿ ಕಳುಹಿಸಲಾಗುತ್ತದೆ. ಸಂಭ್ರಮಗಳು ಮುಗಿಲು ಮುಟ್ಟಿರುತ್ತವೆ. ಸರಳ ಮದುವೆ ಅಂದರೂ ಕೂಡ ಅಲ್ಲಿ ಸುಮಾರು ನೂರು ಜನರಾದ್ರೂ ಸೇರಿರುತ್ತಾರೆ. ಕಲ್ಯಾಣ ಮಂಟಪದಿಂದ ಹಿಡಿದು ಭಾಜಾ ಭಜಂತ್ರಿಯರವರೆಗೂ ಊಟದಿಂದ ಹಿಡಿದು ಮಂತ್ರಘೋಷಗಳನ್ನು ಪಠಿಸುವ ಅರ್ಚಕರವರೆಗೂ ಇಲ್ಲಿ ಖರ್ಚು ಇರುತ್ತದೆ.
ಇನ್ನೇನು ತುಳಸಿ ವಿವಾಹದ ಹಬ್ಬ ಮುಗಿದ ನಂತರ ಮದುವೆಯ ಸಂಭ್ರಮಗಳು ದೇಶದಲ್ಲಿ ಕಳೆಗಟ್ಟಲಿದೆ. ಈ ಮುಂದಿನ ಎರಡು ತಿಂಗಳಲ್ಲಿ ಒಟ್ಟು 48 ಲಕ್ಷ ಜೋಡಿಗಳು ಹೊಸ ಬದುಕಿಗೆ ಕಾಲಿಡಲಿದ್ದಾರೆ. ಈ ಎಲ್ಲಾ ಮದುವೆಗಳಿಂದ ಆಗಲಿರುವ ಒಟ್ಟು ವ್ಯಾಪಾರವನ್ನು ಭಾರತೀಯ ಕೈಗಾರಿಕಾ ಒಕ್ಕೂಟ ಒಂದು ಅಂದಾಜು ಮಾಡಿದೆ. ಅದು ಮಾಡಿರುವ ಅಧ್ಯಯನದ ಪ್ರಕಾರ ಈ ಎರಡು ತಿಂಗಳಲ್ಲಿ ಒಟ್ಟು 6 ಲಕ್ಷ ಕೋಟಿ ರೂಪಾಯಿ ಆದಾಯ ಬರಲಿದೆ ಎಂದು ಹೇಳಲಾಗಿದೆ.
ಈ ಒಂದು ಒಕ್ಕೂಟ ಹೇಳುವ ಪ್ರಕಾರ ಈ ಮುಂದಿನ ಎರಡು ತಿಂಗಳಲ್ಲಿ ಕೇವಲ ದೆಹಲಿಯಲ್ಲಿಯೇ ಸುಮಾರು 4.5 ಲಕ್ಷ ವಿವಾಹಗಳು ಜರಗುವ ನಿರೀಕ್ಷೆಯಿದೆ. ದೆಹಲಿಯೊಂದರಲ್ಲಿಯೇ ಈ ಮದುವೆಗಳ ಮೂಲಕ ಸುಮಾರು 1.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ವ್ಯಾಪಾರಗಳು ನಡೆಯಲಿವೆ ಎಂದು ಅಂದಾಜಿಸಲಾಗಿದೆ.
ನವೆಂಬರ್ 12 ರಿಂದ ಮದುವೆ ಮುಹೂರ್ತಗಳ ಆರಂಭಗೊಳ್ಳಲಿವೆ. ಚಿಲ್ಲರೆ ವ್ಯಾಪಾರಿಗಳ ಆದಾಯ ಈ ಎರಡು ತಿಂಗಳಲ್ಲಿ ದೊಡ್ಡಮಟ್ಟದಲ್ಲಿ ಬೆಳವಣಿಗೆ ಹೊಂದಲಿದೆ ಎಂದು ಸಿಎಐಟಿ ಹೇಳಿದೆ. ಭಾರತೀಯ ಕೈಗಾರಿಕಾ ಒಕ್ಕೂಟ ಮಾಡಿರುವ ಸಮೀಕ್ಷೆಯಲ್ಲಿ ರಿಟೇಲ್ ಸೆಕ್ಟರ್ನಿಂದ ಹಿಡಿದು ಸರಕು ಮತ್ತು ಸೇವೆಗಳ ಒಟ್ಟು ಆದಾಯ ಸುಮಾರು 5.9 ಲಕ್ಷ ಕೋಟಿ ತಲುಪಲಿದೆ ಎಂದು ಹೇಳಲಾಗಿದೆ.
ನವೆಂಬರ್ 12 ರಿಂದ ಮುಂದಿನ ಫೆಬ್ರವರಿಯವರೆಗೂ ಮದುವೆಗಳ ಸೀಸನ್ ಇದ್ದು. ಬಟ್ಟೆ ಅಂಗಡಿಗಳಿಂದ ಹಿಡಿದು ಬಂಗಾರದ ಅಂಗಡಿಗಳು. ಮ್ಯೂಸಿಕ್ ಸಿಸ್ಟಮ್ನಿಂದ ಹಿಡಿದು ಕ್ಯಾಟರಿಂಗ್ ಸೇವೆಗಳವರೆಗೂ ಎಲ್ಲರಿಗೂ ಭರ್ಜರಿ ವ್ಯಾಪಾರಗಳು ನಡೆಯಲಿವೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಮದುವೆಯ ಸಿದ್ಧತೆಗಳು ಆರಂಭಗೊಂಡಿದ್ದು ನವೆಂಬರ್ ಎರಡನೇ ವಾರದಿಂದಲೇ ವ್ಯಾಪಾರಗಳು ಜೋರಾಗಲಿವೆ ಎಂದು ಹೇಳಲಾಗಿದೆ.