ಮನೆಯಲ್ಲಿಯೇ ತಯಾರಾಗುವ ಊಟದಲ್ಲಿಯೂ ಇವೆ ಸಮಸ್ಯೆಗಳು
ಐಸಿಎಂಆರ್ ಬಹಿರಂಗಗೊಳಿಸಿದ ವರದಿಯಲ್ಲಿವೆ ಶಾಕಿಂಗ್ ಸತ್ಯಗಳು
ಮನೆಯೂಟದಲ್ಲಿಯೂ ಇವೆ ಹಲವು ನ್ಯೂನತೆಗಳು, ಪರಿಹಾರವೇನು?
ಮಕ್ಕಳು ಕೆಲಸಕ್ಕಾಗಿಯೋ, ವಿದ್ಯಾಭ್ಯಾಸಕ್ಕಾಗಿಯೋ ಮನೆಯಿಂದ ದೂರದ ನಗರಗಳಿಗೆ ಹೋದಾಗ ಪೋಷಕರಿಗೆ ಒಂದೇ ಚಿಂತೆ. ಅಲ್ಲಿ ಊಟ ಹೇಗಿರುತ್ತೊ? ಮನೆಯೂಟ ಉಂಡವನಿಗೆ ಹೊರಗಿನ ಊಟ ಎಷ್ಟು ಸುರಕ್ಷಿತವೋ ಅನ್ನೋದು. ಮನೆಯೂಟ ಮಾತ್ರವೇ ಸುರಕ್ಷಿತ ಎನ್ನುವ ಒಂದು ಗಾಢವಾದ ನಂಬಿಕೆ ನಮ್ಮ ಭಾರತೀಯರಲ್ಲಿ ಇದೆ. ತಾಜಾ ತರಕಾರಿ, ಎಣ್ಣೆ ಇವುಗಳಿಂದ ಸಿದ್ಧಗೊಂಡ ತಾಜಾ ಆಹಾರ ತಿನ್ನುವುದಕ್ಕೂ, ಆಚೆ ಹೋಟೆಲ್, ಹಾಸ್ಟೆಲ್ಗಳಲ್ಲಿ ಸಿದ್ಧಗೊಳ್ಳುವ ಆಹಾರಕ್ಕೂ ಸಿಕ್ಕಾಪಟ್ಟೆ ವ್ಯತ್ಯಾಸವಿದೆ ಎಂಬುದು ನಮ್ಮಲ್ಲಿ ಆಳವಾಗಿ ಬೇರೂರಿವ ನಂಬಿಕೆ. ಆದ್ರೆ ಈ ನಂಬಿಕೆಯೇ ಛಿದ್ರಗೊಳ್ಳುವ ಒಂದು ಭಯಾನಕ ಸತ್ಯವನ್ನು ತೆರೆದಿಟ್ಟಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR)
ಐಸಿಎಂಆರ್ ಹೇಳಿರುವ ಪ್ರಕಾರ ನಾವು ಸೇವಿಸುವ ಮನೆಯೂಟವು ಕೂಡ ಅಷ್ಟೊಂದು ಆರೋಗ್ಯಕರವಲ್ಲ. ಈ ಊಟದಲ್ಲಿಯೂ ಕೂಡ ಹೆಚ್ಚು ಉಪ್ಪು, ಕೊಬ್ಬಿನಂಶ ಹಾಗೂ ಹೆಚ್ಚು ಸಕ್ಕರೆಯ ಉಪಯೋಗಗಳು ಆಗುತ್ತಿವೆ. ಇವೆಲ್ಲವೂ ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಮನೆಯೂಟವೂ ಕೂಡ ಕೆಲವೊಮ್ಮೆ ಅನಾರೋಗ್ಯಕರ ರೀತಿಯಲ್ಲಿ ಸಿದ್ಧಗೊಳ್ಳುತ್ತವೆ ಎಂದು ಹೇಳಿದೆ.
ಹೀಗೆ ಸಿದ್ಧಗೊಂಡಿರುವ ಆಹಾರವನ್ನು ನಾವು ನಿತ್ಯ ಸೇವಿಸಿದರೆ ಸರಿಯಾದ ಪೋಷಕಾಂಶಗಳು, ಜೀವಸತ್ವಗಳು ಹಾಗೂ ಪ್ರೊಟೀನ್ಗಳ ಕೊರತೆಯಿಂದಾಗಿ ದೇಹದಲ್ಲಿ ಬೊಜ್ಜು ಬೆಳೆಯುವ ಅಪಾಯಗಳು ಹೆಚ್ಚು ಇರುತ್ತದೆ ಎಂದು ಐಸಿಎಂಆರ್ ಹೇಳಿದೆ. ಅದರಲ್ಲೂ ನಾವು ತಿನ್ನುವ ರುಚಿಕರವಾದ ಪದಾರ್ಥಗಳು ಅನಿಸುವ ಎಣ್ಣೆಯಲ್ಲಿ ಕರಿಯಲಾದ ಪುರಿ, ಬಜ್ಜಿ, ವಡೆ ಇಂತಹ ಪದಾರ್ಥಗಳು ಮೈಯಲ್ಲಿ ಬೊಜ್ಜಿನ ಅಂಶವನ್ನು ಹೆಚ್ಚು ಮಾಡಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತವೆ ಎಂದು ಐಸಿಎಂಆರ್ ಹೇಳಿದೆ. ಮಾತ್ರವಲ್ಲ ರೆಡಿಮೆಡ್ ಆಗಿ ಸಿಗುವಂತಹ ಬೆಳ್ಳುಳ್ಳಿ- ಈರುಳ್ಳಿ ಪೇಸ್ಟ್, ಟೊಮೆಟೊ ಪ್ಯೂರಿ ಇವುಗಳ ಬಳಕೆಯಿಂದಲೂ ನಮ್ಮ ಮನೆಯೂಟ ಕಲುಷಿತಗೊಳ್ಳುತ್ತದೆ. ಇದರಿಂದ ಟೈಪ್ 2 ಡಯಾಬಿಟಿಸ್ ಬರುವ ಸಾಧ್ಯತೆ ಇರುತ್ತದೆ ಎಂದು ಐಸಿಎಂಆರ್ ಹೇಳಿದ್ದು. ಅದರ ಜೊತೆಗೆ ಮನೆಯೂಟ ಹೇಗಿರಬೇಕು ಅಂತಲೂ ಕೂಡ ಹೇಳಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮನೆಯೂಟ ಹೇಗಿರಬೇಕು ಅನ್ನೋದಕ್ಕೆ ಕೆಲವೊಂದಿಷ್ಟು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳನ್ವಯ ಮನೆಯೂಟ ಸಿದ್ಧಗೊಂಡಲ್ಲಿ ಅದಕ್ಕಿಂತ ಆರೋಗ್ಯಕರವಾದ ಡಿಶ್ ಮತ್ತೊಂದಿಲ್ಲ.
ಅಡುಗೆಯಲ್ಲಿ ಹೆಚ್ಚು ಸಾಸಿವೆ ಎಣ್ಣೆ ಹಾಗೂ ತುಪ್ಪ ಬಳಸಿ
ಐಸಿಎಂಆರ್ ಹೇಳುವ ಪ್ರಕಾರ ಅಡುಗೆಯಲ್ಲಿ ರಿಫೈನ್ಡ್ ಸನ್ಫ್ಲಾವರ್ ಆಯಿಲ್, ಪಾಮ್ ಆಯಿಲ್ ಬಳಸುವ ಬದಲು ಸಾಸಿವೆ ಎಣ್ಣೆಯನ್ನು ಬಳಸಲು ಸೂಚಿಸಿದೆ.
ಇನ್ನೂ ಗ್ರಿಲ್ ಮಾಡಿದ ಆಹಾರವನ್ನು ಹೆಚ್ಚು ಬಳಸಲು ಹೇಳಿದೆ. ಉದಾಹರಣೆಗೆ ಹಪ್ಪಳಗಳನ್ನು ಅತಿಯಾಗಿ ಕಾದ ಎಣ್ಣೆಯಲ್ಲಿ ಕರಿದು ತಿನ್ನುವ ಬದಲು ಅದನ್ನು ಸುಟ್ಟು ತಿನ್ನುವುದು ಉತ್ತಮ ಎಂದು ಹೇಳಲಾಗಿದೆ.
ಇನ್ನು ಐಸಿಎಂಆರ್ ತಜ್ಞರು ಹೇಳುವ ಪ್ರಕಾರ ಸ್ಟೀಮ್ಡ್ ರೈಸ್ ಸೇವನೆಯನ್ನು ಹೆಚ್ಚು ಮಾಡುವುದು ಆರೋಗ್ಯಕ್ಕೆ ಒಳ್ಳೆಯದಂತೆ. ಘಮಘಮಿಸುವ ಅನ್ನದ ಸೇವನೆಯನ್ನು ಮಾಡುವುದಾದ್ರೆ ಬಿರಿಯಾನಿಗಿಂತ ಪಲಾವ್ ತುಂಬಾ ಒಳ್ಳೆಯದು ಎಂದು ಐಸಿಎಂಆರ್ ತಜ್ಞರು ಹೇಳಿದ್ದಾರೆ. ಇನ್ನು ಪರಾಟ ಹಾಗೂ ಚಪಾತಿಗಳನ್ನು ಸರಿಯಾಗಿ ಬೇಯಿಸಿ ತಿನ್ನಬೇಕು ಒಂದು ವೇಳೆ ಸರಿಯಾಗಿ ಬೇಯದ ಪರಾಟಾ, ಚಪಾತಿ ಹಾಗೂ ನಾನ್ಗಳನ್ನು ತಿನ್ನುವುದರಿಂದ ದೇಹಕ್ಕೆ ಒದಗಬೇಕಾಗಿದ್ದ 250 ರಿಂದ 300ರಷ್ಟು ಕ್ಯಾಲರೀಸ್ 600 ತಲುಪುವ ಸಂಭವ ಇರುತ್ತದೆ ಎಂದು ಐಸಿಎಂಆರ್ ಹೇಳಿದೆ. ಇನ್ನೂ ಉತ್ತಮ ಆಹಾರವೂ ಕೂಡ ಒಮ್ಮೊಮ್ಮೆ ಸರಿಯಾಗಿ ಅಗಿದು ಜಗಿದು ತಿನ್ನದೇ ಇದ್ದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಾವು ತಿನ್ನುವ ಕ್ರಮವೂ ಕೂಡ ಸರಿಯಾಗಿ ಇರಬೇಕು ಎಂದು ಐಸಿಎಂಆರ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.