- ಸ್ಮೃತಿ ಮಂದಾನ ಸೆಂಚುರಿ ಬಾರಿಸದಿದ್ದರೇ ಸರಣಿ ಕೈ ಜಾರುತ್ತಿತ್ತು
- ಆರಂಭಿಕ ಬ್ಯಾಟರ್ಸ್ ಇಂದ ಸಂಕಷ್ಟಕ್ಕೆ ಸಿಲುಕಿದ್ದ ನ್ಯೂಜಿಲೆಂಡ್
- ಹಾಫ್ಸೆಂಚುರಿ ಸಿಡಿಸಿ ತಂಡವನ್ನ ದಡ ಸೇರಿಸಿದ ನಾಯಕಿ ಕೌರ್
ನ್ಯೂಜಿಲೆಂಡ್ ಮಹಿಳಾ ಟೀಮ್ ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ ಸ್ಮೃತಿ ಮಂದಾನ ಅವರ ಭರ್ಜರಿ ಶತಕದ ನೆರವಿನಿಂದ ಭಾರತದ ಮಹಿಳಾ ತಂಡ ಗೆದ್ದು ಬೀಗಿದೆ. ಈ ಮೂಲಕ 2-1ರಿಂದ ಸರಣಿ ಗೆದ್ದುಕೊಂಡು ನಾಯಕಿ ಹರ್ಮನ್ಪ್ರೀತ್ ಕೌರ್ ಪಡೆ ಸಂತಸ ವ್ಯಕ್ತಪಡಿಸಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಕ್ಯಾಪ್ಟನ್ ಸೋಫಿ ಡಿವೈನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಕಳೆದ ಪಂದ್ಯದಂತೆ ಆರಂಭಿಕ ಆಟಗಾರ್ತಿಯರು ಆಡಲಿಲ್ಲ. 88 ರನ್ ಇರುವಾಗಲೇ ಪ್ರಮುಖ 5 ವಿಕೆಟ್ ಕಳೆದುಕೊಂಡಿತು. ಇದರಿಂದ ತೀವ್ರ ಸಂಕಷ್ಟಕ್ಕೆ ಕಿವೀಸ್ ಸಿಲುಕಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ರನ್ಗಳು ಬಂದಿದ್ದರಿಂದ 49.5 ಓವರ್ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 232 ರನ್ಗಳನ್ನ ಗಳಿಸಿತು.
ಈ ಟಾರ್ಗೆಟ್ ಬೆನ್ನು ಹತ್ತಿದ ಟೀಮ್ ಇಂಡಿಯಾ ಆರಂಭದಲ್ಲೇ ಮತ್ತೆ ವಿಫಲ ಅನುಭವಿಸಿತ್ತು. ಓಪನರ್ ಆಗಿ ಸ್ಮತಿ ಮಂದಾನ ಹಾಗೂ ಶಫಾಲಿ ವರ್ಮಾ ಕ್ರೀಸ್ಗೆ ಬಂದಿದ್ದರು. ಆದರೆ ಶಫಾಲಿ ಕೇವಲ 12 ರನ್ಗೆ ಕ್ಯಾಚ್ ನೀಡಿ ಹೊರ ನಡೆದರು. ಬಳಿಕ ಬ್ಯಾಟಿಂಗ್ ಮಾಡಲು ಬಂದ ಯಾಸ್ತಿಕಾ ಭಾಟಿಯಾ ಕೆಲ ಹೊತ್ತು ಆಡಿದರು. ಆದರೆ 35 ರನ್ಗಳಿಸಿ ಆಡುವಾಗ ಸೋಫಿಗೆ ಕ್ಯಾಚ್ ಕೊಟ್ಟರು. ಆದರೆ ಇನ್ನೊಂದು ಕಡೆ ಕ್ರೀಸ್ ಕಾಯ್ದುಕೊಂಡಿದ್ದ ಸ್ಮತಿ ಮಂದಾನ ತಮ್ಮ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ್ದರು. ನಾಯಕಿ ಹರ್ಮನ್ಪ್ರೀತ್ ಜೊತೆ ಸೇರಿ ಒಳ್ಳೆಯ ಪಾರ್ಟನರ್ಶಿಪ್ನಲ್ಲಿ ರನ್ ಕೊಳ್ಳೆ ಹೊಡೆದರು.
122 ಎಸೆತಗಳನ್ನು ಎದುರಿಸಿದ ಸ್ಮತಿ ಮಂದಾನ 10 ಬೌಂಡರಿ ಸಮೇತ ಸೆಂಚುರಿ ಸಿಡಿಸಿ ಸಂಭ್ರಮಿಸಿದರು. ಮೋದಿ ಸ್ಟೇಡಿಯಂ ದೊಡ್ಡದಾಗಿದ್ದರಿಂದ ಇಲ್ಲಿ ಮಹಿಳಾ ಆಟಗಾರ್ತಿಯರು ಸಿಕ್ಸರ್ ಸಿಡಿಸುವುದು ವಿರಾಳವಾಗಿರುತ್ತದೆ. ಹೀಗಾಗಿ ಈ ತಂಡದಲ್ಲಿ ಕೇವಲ 4 ಸಿಕ್ಸರ್ಗಳು ಮಾತ್ರ ಬಂದಿದ್ದು ಅದು ಕಿವೀಸ್ ಆಟಗಾರ್ತಿಯರು ಬಾರಿಸಿದ್ದು ಆಗಿವೆ. ಸ್ಮತಿ ಮಂದಾನಗೆ ಉತ್ತಮ ಸಾಥ್ ಕೊಟ್ಟ ನಾಯಕಿ ಹರ್ಮನ್ಪ್ರೀತ್ ಹಾಫ್ಸೆಂಚುರಿ ಸಿಡಿಸುವ ಮೂಲಕ ತಂಡವನ್ನು ದಡ ಸೇರಿಸಿದರು. ಈ ಮೂಲಕ ಭಾರತ 44.4 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 236 ರನ್ ಗಳಿಸಿ ವಿಜಯ ದಾಖಲಿಸಿ ಸರಣಿ ಗೆದ್ದುಕೊಂಡಿತು.