ಸದ್ಯದಲ್ಲಿಯೇ ಶ್ರೀಸಾಮಾನ್ಯನ ಮೇಲೆ ಮತ್ತೊಂದು ಬೆಲೆ ಏರಿಕೆ ಬರೆ!
ಯಾವೆಲ್ಲಾ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಲಿದೆ ಅಂತ ಗೊತ್ತಾ?
ಎಫ್ಎಂಸಿಜಿ ಕಂಪನಿಗಳು ಬೆಲೆ ಏರಿಕೆ ಬಗ್ಗೆ ಅಸಲಿಗೆ ಹೇಳುತ್ತಿರುವುದೇನು?
ದಿನನಿತ್ಯದ ಬಳಕೆಗಳ ಉತ್ಪನ್ನಗಳಿಗೆ ಈಗ ಕಠಿಣ ಸಮಯ. ತ್ವರಿತವಾಗಿ ಮಾರಾಟವಾಗುವ ಗ್ರಾಹಕರ ವಸ್ತುಗಳು ( FMCG)ಕಂಪನಿಗಳ ಲಾಭದ ಅಂತರದಲ್ಲಿ ಭಾರೀ ಇಳಿಕೆ ಕಂಡ ಕಾರಣದಿಂದಾಗಿ ಹಲವು ಉತ್ಪನ್ನಗಳ ಬಲೆ ಏರಿಕೆಯಾಗುವ ಸಂಭವಗಳು ಹೆಚ್ಚಿದೆ ಎಂದೇ ಹೇಳಲಾಗಿದೆ. ಎಣ್ಣೆ, ಬಿಸ್ಕತ್, ಶಾಂಪೂ ಸೇರಿ ಹಲವು ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿ ಕಾಡುತ್ತಿವೆ. ಒಂದು ಕಡೆ ಲಾಭದ ಅಂತರದಲ್ಲಿ ವ್ಯತ್ಯಾಸ ಹಾಗೂ ಆಹಾರ ಹಣದುಬ್ಬರ ಸೇರದಿಂತೆ ಹಲವು ಸಮಸ್ಯೆಗಳು ಸದ್ಯ ಎಫ್ಎಮ್ಸಿಜಿಗಳನ್ನು ಕಾಡುತ್ತಿದ್ದು ಬೆಲೆ ಏರಿಸುವ ಅನಿವಾರ್ಯತೆಗೆ ಅವು ಮುಂದಾಗಿವೆ. ಅದರಲ್ಲೂ ಕೆಲವು ಕಂಪನಿಗಳ ವಸ್ತುಗಳ ಬೇಡಿಕೆ ಹಾಗೂ ಬಳಕೆಯೂ ಕುಸಿದಿರುವ ಕಾರಣ ಈ ಕಂಪನಿಗಳ ಉತ್ಪನ್ನಗಳಲ್ಲಿ ಬೆಲೆ ಏರಿಕೆಯಾಗಲಿವೆ.
ಪ್ರಮುಖ ಎಫ್ಎಂಸಿಜಿ ಕಂಪನಿಗಳಾದ ಹಿಂದೂಸ್ತಾನ್ ಯುನಿಲೀವರ್ ಲಿಮಿಟೆಡ್, ಗೊದ್ರೇಜ್, ಮಾರಿಕೊ, ಐಟಿಸಿ ಹಾಗೂ ಟಾಟಾ ಕಸ್ಯೂಮರ್ ಪ್ರಾಡಕ್ಟ್ ಲಿಮಿಟೆಡ್ನ ಉತ್ಪನ್ನಗಳ ಬಳಕೆ ಮಾರುಕಟ್ಟೆಯಲ್ಲಿ ಕಡಿಮೆಯಾಗಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಅವುಗಳ ಬಳಕೆಯ ಪ್ರಮಾಣ ಕುಸಿದಿದ್ದು ಮತ್ತಷ್ಟು ಆತಂಕಕ್ಕೆ ಈಡು ಮಾಡಿದೆ. ಮಾರುಕಟ್ಟೆ ತಜ್ಞರು ಮಾಡಿರುವ ಅಂದಾಜಿನ ಪ್ರಕಾರ ನಗರಗಳಲ್ಲಿ ಶೇಕಡಾ 65 ರಿಂದ 68ರಷ್ಟು ಎಫ್ಎಂಸಿಜಿಗಳ ಮಾರಾಟವಿದೆ. ಇದು ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿ ನೋಡಿದರೆ ತೀರಾ ಕಡಿಮೆ ಎನ್ನಲಾಗುತ್ತಿದೆ.
ಜಿಸಿಪಿಎಲ್ನ ಮುಖ್ಯಸ್ಥ ಸುಧೀರ್ ಸೀತಾಪತಿಯವರು ಹೇಳುವ ಪ್ರಕಾರ ಸದ್ಯ 2 ಕಾಲು ವರ್ಷಗಳನ್ನು ಅಳತೆ ಮಾಡಿ ನೋಡಿದಾಗ ಈ ರೀತಿಯಾಗುತ್ತಿರುವುದು ಕಂಡು ಬಂದಿದೆ. ಇದು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಹಾದು ಹೋಗುವ ಒಂದು ಹಂತ. ಇಂತಹ ಸಮಯದಲ್ಲಿ ಖರ್ಚುಗಳನ್ನು ನಿಯಂತ್ರಿಸಿ ಬೆಲೆಯಲ್ಲಿ ಏರಿಕೆ ಮಾಡಿ ಲಾಭದ ಅಂತರವನ್ನು ಹೆಚ್ಚಿಸಿಕೊಳ್ಳುವುದು ಕೂಡ ಸಾಮಾನ್ಯ. ಸದ್ಯದ ಸ್ಥಿತಿಯಲ್ಲಿ ಎಣ್ಣೆ ಬೆಲೆ ಭಾರತದಲ್ಲಿ ಗ್ರಾಹಕರ ಬೇಡಿಕೆಯನ್ನು ಕಡಿಮೆ ಮಾಡಿದೆ. ಆದ್ರೆ ಜನಪ್ರಿಯ ಬ್ರ್ಯಾಂಡ್ಗಳಾದ ಸಿಂಥಾಲ್, ಗೊದ್ರೇಜ್ ನಂ1 ಮತ್ತು ಎಚ್ಐಟಿ ಈ ಬಾರಿ ಅತ್ಯುತ್ತಮ ಲಾಭವನ್ನು ಗಳಿಸಿವೆ ಎಂದು ಹೇಳಿದ್ದಾರೆ.
ಆದ್ರೆ ಕಳೆದ ಜುಲೈನಿಂದ ಸೆಪ್ಟೆಂಬರ್ 2024ರ ಕಾಲು ವರ್ಷದಲ್ಲಿ ಕೆಲವು ಕಂಪನಿಗಳು ಶೇಕಡಾ 17.65 ರಷ್ಟು ಲಾಭದಲ್ಲಿ ಇಳಿಕೆಯನ್ನು ಕಂಡಿವೆ. ಅದರ ಒಟ್ಟು ಮೊತ್ತ 4174.52 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ನೆಸ್ಲೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾರಾಯಣ ಅವರು ಹೇಳುವ ಪ್ರಕಾರ ಈ ಮಧ್ಯದಲ್ಲಿ ಉಂಟಾದ ಅತಿಯಾದ ಆಹಾರ ಹಣದುಬ್ಬರದಿಂದಾಗಿ ಹೌಸ್ಹೋಲ್ಡ್ ಬಜೆಟ್ಗೆ ಮೇಲೆ ದೊಡ್ಡ ವ್ಯತಿರಿಕ್ತ ಪರಿಣಾಮ ಬೀರಿದೆ ಹೀಗಾಗಿ ಮ್ಯಾಗಿ, ಕಿಟ್ಕ್ಯಾಟ್ ಮತ್ತು ನೆಸ್ಕಫೆಯಂತಹ ಕಂಪನಿಗಳ ಸ್ಥಳೀಯ ಮಾರಾಟ 1.2 ಪರ್ಸೆಂಟ್ಗೆ ಬಂದು ನಿಂತಿದೆ. ಗ್ರಾಮೀಣ ಭಾಗಗಳಲ್ಲಂತೂ ಅವುಗಳ ಬೆಳವಣಿಗೆ ಅತ್ಯಂತ ಕಳಪೆಯಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ತ್ವರಿತವಾಗಿ ಮಾರಾಟವಾಗುವ ಗ್ರಾಹಕರ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈಗಾಗಲೇ ದಿನಬಳಕೆಯ ವಸ್ತುಗಳ ಬೆಲೆಯಿಂದ ಹೈರಾಣಾಗಿರುವ ಶ್ರೀಸಾಮಾನ್ಯನ ಮೇಲೆ ಮತ್ತೊಂದು ಬರೆ ಬೀಳುವ ಸೂಚನೆಯನ್ನು ಎಫ್ಎಂಸಿಜಿ ಕಂಪನಿಗಳು ಕೊಟ್ಟಿವೆ.