ವಿಜಯಪುರ ಅನ್ನದಾತರ ಜಮೀನುಗಳ ಪಹಣಿಯಲ್ಲಿ ‘ವಕ್ಫ್’ ಹೆಸರು
ವಕ್ಫ್ ವಿರುದ್ಧ ಹೋರಾಟಕ್ಕೆ ಸಜ್ಜಾಗಿ ನಿಂತಿದ್ದ ರೈತ ಪಡೆಗೆ ಕೊನೆಗೂ ಗೆಲುವು
11 ಎಕರೆ ಬಿಟ್ಟು ಉಳಿದಿದ್ದೆಲ್ಲವೂ ರೈತರ ಜಮೀನು ಎಂದ ಸಚಿವ ಎಂಬಿಪಾ
ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ವಿವಾದ ಭಾರೀ ಚರ್ಚೆಗೆ ಗ್ರಾಸವಾಗಿದೆ. ರೈತರ ಜಮೀನನ್ನು ವಕ್ಫ್ ಮಂಡಳಿಗೆ ಸೇರುವ ಹುನ್ನಾರಕ್ಕೆ ಸರ್ಕಾರ ಕೈ ಹಾಕಿರುವ ಆರೋಪ ಕೇಳಿ ಬಂದಿದೆ. ಸರ್ಕಾರದ ನೋಟಿಸ್‌ನಿಂದ ಕಂಗಾಲಾದ ರೈತರು ತಮ್ಮ ಜಮೀನನ್ನು ಉಳಿಸಿಕೊಳ್ಳಲು ಕಾನೂನು ಸಮರದ ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ವಕ್ಫ್ ಆಸ್ತಿಯ ಬಗ್ಗೆ ಸರ್ಕಾರದ ಸಚಿವರು ಉಲ್ಟಾ ಹೊಡೆದಿದ್ದಾರೆ.
ಕರ್ನಾಟಕದಲ್ಲಿ ಸದ್ದಿಲ್ಲದೇ ರೈತರ ಜಮೀನನ್ನು ವಕ್ಫ್ ಮಂಡಳಿ ನೀಡಲು ಸರ್ಕಾರ ಕೈ ಚಳಕ ತೋರಿದ್ಯಾ ಅನ್ನೋ ಅನುಮಾನ ಮೂಡಿದೆ. ಇದಕ್ಕೆ ಕಾರಣ.. ವಿಜಯಪುರ ಜಿಲ್ಲೆಯಲ್ಲಿ ಅನ್ನದಾತರಿಗೆ ತಹಶೀಲ್ದಾರ್ ನೀಡಿರುವ ನೋಟಿಸ್ನಲ್ಲಿ ವಕ್ಫ್ ಮಂಡಳಿಯ ಹೆಸರು ಇರೋದು. ಇದು ಅನ್ನದಾತರನ್ನು ಕಂಗಾಲಾಗಿಸಿದ್ದು, ಸರ್ಕಾರದ ವಿರುದ್ಧ ಬೀದಿಳಿಯಲು ರೈತರು ಮುಂದಾಗಿದ್ದಾರೆ.
11 ಎಕರೆ ಬಿಟ್ಟು ಉಳಿದ ಭೂಮಿ ರೈತರದ್ದೇ ಎಂದ ಎಂ.ಬಿ. ಪಾಟೀಲ್
ರೈತರು ಜಮೀನುಗಳನ್ನು ವಕ್ಫ್ ಬೋರ್ಡ್‌ಗೆ ಸೇರಿಸುವ ವಿಚಾರ ವಿಜಯಪುರ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೆಲ ರೈತರಿಗೆ ತಹಶೀಲ್ದಾರ್ ಮೂಲಕ ಸರ್ಕಾರ ನೋಟಿಸ್ ನೀಡಿದ್ರೆ. ಇನ್ನೂ ಕೆಲ ರೈತರಿಗೆ ನೋಟಿಸ್ ನೀಡದೇ ಪಹಣಿಯಲ್ಲಿ ವಕ್ಫ್ ಬೋರ್ಡ್ ಎಂದು ಅಧಿಕಾರಿಗಳು ನಮೂದಿಸಿದ್ದಾರೆ. ಇದೀಗ ಗೆಜೆಟ್‌ನಲ್ಲಿ ತಪ್ಪಾಗಿ ನಮೂದಿಸಿದ್ದರಿಂದಾಗಿ ವಿಜಯಪುರ ಜಿಲ್ಲೆಯ ಹೊನವಾಡ ಗ್ರಾಮದ 1,200 ಎಕರೆ ವಕ್ಫ್ ಆಸ್ತಿ ಎನ್ನುವ ಗೊಂದಲ ಸೃಷ್ಟಿಯಾಗಿತ್ತು ಅನ್ನೋದನ್ನ ಸರ್ಕಾರ ಸ್ಪಷ್ಟಪಡಿಸಿದೆ.
ಹೊನವಾಡದಲ್ಲಿರೋ 1,200 ಎಕರೆ ಜಮೀನು ವಕ್ಫ್ ಆಸ್ತಿ ಅಂತ ರೈತರಿಗೆ ನೋಟಿಸ್ ನೀಡಲಾಗಿತ್ತು. ಇದೀಗ ರೈತರು ಕಾನೂನು ಸಮರ ಸಾರುತ್ತಿದ್ದಂತೆ ಸರ್ಕಾರ ಸ್ಪಷ್ಟನೆ ನೀಡಿದೆ. 1,200 ಎಕರೆ ಜಮೀನಿನಲ್ಲಿ 11 ಎಕರೆ ಮಾತ್ರ ವಕ್ಫ್ ಬೋರ್ಡ್‌ಗೆ ಸೇರಿದೆ. ಈ 11 ಎಕರೆ ಜಮೀನಿನಲ್ಲಿ 10 ಎಕರೆ 14 ಗುಂಟೆಯಲ್ಲಿ ಖಬರಸ್ತಾನವಿದೆ. ಉಳಿದ 24 ಗುಂಟೆಯಲ್ಲಿ ಈದ್ಗಾ ಮಸೀದಿ ಇತ್ಯಾದಿ ಕಟ್ಟಡಗಳಿವೆ. ಇನ್ನುಳಿದ ಜಮೀನೆಲ್ಲಾ ರೈತರಿಗೆ ಸೇರಿದ್ದು ಅಂತ ತಹಸೀಲ್ದಾರ್ ಮತ್ತು ಡಿಸಿ ಸ್ಪಷ್ಟನೆ ನೀಡಿದ್ದಾರೆ.
ವಕ್ಫ್ ಆಸ್ತಿ ವಿಚಾರದಲ್ಲಿ ಆಗಿರೋ ಗೊಂದಲದ ಬಗ್ಗೆ ಸಚಿವ ಎಂ.ಬಿ ಪಾಟೀಲ್ ಕೂಡಾ ಸ್ಪಷ್ಟನೆ ನೀಡಿದ್ದಾರೆ. `ವಿಜಯಪುರ ಜಿಲ್ಲೆಯಲ್ಲಿ 1974, 1978 ಮತ್ತು 2016ರಲ್ಲಿ ವಕ್ಫ್ ಆಸ್ತಿಗಳ ಅಧಿಸೂಚನೆ ಹೊರಬಿದ್ದಿದೆ. ವಕ್ಫ್ ಆಸ್ತಿ ಇರುವುದು ವಿಜಯಪುರನಗರದ ಮಹಾಲಬಾಗಾಯತದಲ್ಲಿ. ಆದ್ರೆ 1974ರ ಗೆಜೆಟ್‌ನಲ್ಲಿ ಮಹಾಲಬಾಗಾಯತದ ಪಕ್ಕ ಬ್ರ್ಯಾಕೆಟ್‌ನಲ್ಲಿ ಹೊನವಾಡ ಎಂದು ಬರೆದು ಬಿಟ್ಟಿದ್ದಾರೆ. ಈ ಆಸ್ತಿ ರೈತರಿಗೆ ಸೇರಿದ್ದು ಅಂತ ಎಂಬಿಪಿ ಸ್ಪಷ್ಟನೆ ನೀಡಿದ್ದಾರೆ.
ಒಟ್ಟಾರೆ, ಯಾವುದು ನಿಯಮಾನುಸಾರ ವಕ್ಫ್ ಆಸ್ತಿಯೋ ಅದಷ್ಟೇ ಅವರಿಗೆ ಸೇರುತ್ತದೆ. ರೈತರುಗೊಂದಲಕ್ಕೆ ಒಳಗಾಗಬೇಕಾಗಿಲ್ಲ ಅಂತ ಸಚಿವರು ಅಭಯ ನೀಡಿದ್ದಾರೆ. ಈ ಮೂಲಕ ರೈತರ ಭೂ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.