ಸೂಪ್ ನೀಡಿ ರಿವೇಂಜ್ ತೀರಿಸಿದ 16 ವರ್ಷದ ಬಾಲಕಿ
16 ವರ್ಷದ ಬಾಲಕಿಯ ಕೈಯಾರೆ ಮಾಜಿ ಗೆಳೆಯ ಸಾವು
ಮಾಜಿ ಗೆಳೆಯನ ಮೇಲೆ ಸೇಡು ತೀರಿಸಿದ ಬಾಲಕಿಯ ಕತೆ ಇದು
ಇತ್ತೀಚೆಗೆ ದಕ್ಷಿಣ ಕನ್ನಡದ ಕಾರ್ಕಳದಲ್ಲಿ ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ತಾಳಿ ಕಟ್ಟಿದ ಪತಿಗೆ ಸ್ಲೋ ಪಾಯಿಜನ್ ನೀಡಿ ಕೊಲೆ ಮಾಡಿರುವ ಘಟನೆ ಅಚ್ಚರಿಗೆ ಕಾರಣವಾಗಿತ್ತು. ಕೊನೆಗೆ ಅಣ್ಣನೇ ತನ್ನ ತಂಗಿಯ ಮುಖವಾಡವನ್ನು ಬಯಲು ಮಾಡಿದ್ದನು. ಆದರೀಗ ಅಂತಹದ್ದೇ ಘಟನೆಯನ್ನು ಹೋಲುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಅದೇನೆಂದರೆ ಮಾಜಿ ಗೆಳೆಯನ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ 16 ವರ್ಷದ ಬಾಲಕಿ ಐವರನ್ನು ಬಲಿಕೊಟ್ಟ ಘಟನೆ ಬೆಳಕಿಗೆ ಬಂದಿದೆ.
ಅಂದಹಾಗೆಯೇ ಇದು ನೈಜೀರಿಯಾದಲ್ಲಿ ನಡೆದಿದೆ. ಅಲ್ಲಿನ ಎಡೋ ಸ್ಟೇಟ್ನಲ್ಲಿ ಅಕ್ಟೋಬರ್ 26, 2024ರಂದು ವಿಷಪೂರಿತ ಸೂಪ್ ಸೇವಿಸಿದ ಉಜೈರುವಿನ ಅಫಾಶಿಯೋ ಸಮುದಾಯದ ಐವರು ಪ್ರಾಣ ಕಳೆದುಕೊಂಡಿದ್ದಾರೆ.
16 ವರ್ಷದ ಬಾಲಕಿ ತನ್ನ ಮಾಜಿ ಗೆಳೆಯನನ್ನು ಕೊಲ್ಲುವ ಉದ್ದೇಶದಿಂದ ಕಾಳು ಮೆಣಸಿನ ಸೂಪ್ನಲ್ಲಿ ವಿಷ ಬೆರೆಸಿದ್ದಾಳೆ. ನಂತರ ಅದನ್ನು ಬಾಲಕಿ ತನ್ನ ಮಾಜಿ ಗೆಳೆಯ, ಆತನ ಗೆಳತಿ ಮತ್ತು ಸ್ನೇಹಿತರಿಗೆ ನೀಡಿದ್ದಾಳೆ. ಪರಿಣಾಮ ಐವರು ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿರುವವರನ್ನು 19 ವರ್ಷದ ಇಮ್ಯಾನೆಯೆಲ್ ಎಲೋಜಿ, ಆತನ ಗೆಳತಿ ಅದಾ ಸ್ಯಾಮ್ಯುಯೆಲ್ ಮತ್ತು ಸ್ನೇಹಿತರಾದ ನೂರುದ್ದೀನ್, ಸ್ಯಾಮ್ಯುಯೆಲ್ ಅಯೆಗ್ವಾಲೊ, ಜೆಫ್ರಿ ಅಯೆಗ್ವಾಲೊ ಸೇರಿದ್ದಾರೆ.
ಇಮ್ಯಾನುಯೆಲ್ ತಂದೆ ತನ್ನ ಮಗನನ್ನು ಬೆಳಗ್ಗಿನಿಂದ ಹುಡುಕಾಡಿದಾಗ ಅಪಾರ್ಟ್ಮೆಂಟ್ನಲ್ಲಿ ಐವರು ಶವವಾಗಿ ಸಿಕ್ಕಿದ್ದಾರೆ. ಇಮ್ಯಾನುಯೆಲ್ ಮತ್ತು ಅದಾ ಹಾಸಿಗೆ ಮೇಲೆ ಹೆಣವಾಗಿ ಸಿಕ್ಕರೆ, ಉಯಳಿದವರು ಕೋಣೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.