ಹಂಗಿಸಿದವರ ಎದುರೇ ತಲೆ ಎತ್ತಿ ನಡೆದವರ ಯಶೋಗಾಥೆ
ಆ ಪ್ರತೀಕಾರದ ಪ್ರತಿಜ್ಞೆಯಿಂದ ಜೀವನ ಬದಲಾಗಿ ಸಾಧನೆ
ಹೋಟೆಲ್ ಖರೀದಿ ಬಳಿಕ ಸೈಮನ್ ಸಿಯೊಗೆ ಮತ್ತೊಂದು ಸವಾಲು
ಬಾಲಿವುಡ್‌ನ ಶ್ರೇಷ್ಠ ಚಲನಚಿತ್ರ ದೀವಾರ್‌ನ ಕಥೆ ನೆನೆಪಿಸುವ ಕಥೆ ಇದು. ಮಗುವಿನ ಪ್ರತೀಕಾರದ ಪ್ರತಿಜ್ಞೆಯು ಅವನ ಜೀವನವನ್ನು ಬದಲಾಯಿಸುವ ಸಾಧನೆಗಳಿಗೆ ಪ್ರೇರೇಪಿಸುತ್ತದೆ. ಕೆಲವು ಸಾಧಕರ ಕಥೆ ಕೇಳಿದ್ರೆ ಮೈನವೀರೇಳಿಸುತ್ತದೆ. ಅವರೆಲ್ಲ ತಮಗೆ ಅವಮಾನವಾದ ಜಾಗದಲ್ಲೇ ಎದ್ದು ನಿಂತವರು. ಹಂಗಿಸಿದವರ ಎದುರೇ ತಲೆ ಎತ್ತಿ ನಡೆದವರು. ಚಿಕ್ಕವನಾಗಿದ್ದಾಗ ಐಷಾರಾಮಿ ಹೋಟೆಲ್ನಿಂದ ಹೊರಹಾಕಲ್ಪಟ್ಟ ವ್ಯಕ್ತಿಯೊಬ್ಬ ಅದೇ ಹೋಟೆಲ್ನ ಮಾಲೀಕನಾದ ಸ್ಟೋರಿ ಇದು.
ಹೌದು, ಮಕಾವೊ ಉದ್ಯಮಿ ಸೈಮನ್ ಸಿಯೊ ಬಾಲ್ಯದ ಕನಸೊಂದನ್ನು ಈಡೇರಿಸಿಕೊಂಡಿದ್ದಾರೆ. ಚಿಕ್ಕಂದಿನಲ್ಲಿ ಮಕಾವೊದ ಗ್ರ್ಯಾಂಡ್ ಹೋಟೆಲ್ ಬಳಿಯ ವಠಾರದಲ್ಲಿದ್ದ ಸೈಮನ್ ಸಿಯೊ, ಜೊತೆಗಾರ ಬಾಲಕರೊಂದಿಗೆ ಐಷಾರಾಮಿ ಹೋಟೆಲ್ ಸೆಂಟ್ರಲ್ಗೆ ಹೋಗಿದ್ದರು. ಆಗ ಅವರಿಗೆ ಅಲ್ಲಿ ಪ್ರವೇಶ ನಿರಾಕರಿಸಲಾಯ್ತು. ಅಲ್ಲದೇ ಹೋಟೆಲ್ನಿಂದ ಹೊರಹಾಕಲಾಯತು. ಅವಮಾನ ಎದುರಿಸಿದ ನಂತರ ಸೈಮನ್ ಸಿಯೊ, ಮುಂದೊಂದು ದಿನ ಆ ಹೋಟೆಲ್ ಖರೀದಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದರು. ಈಗ ತಮ್ಮ 65ನೇ ವಯಸ್ಸಿನಲ್ಲಿ ತಮಗೆ ಪ್ರವೇಶ ನಿರಾಕರಿಸಿದ ಹೋಟೆಲ್ ಅನ್ನೇ ಖರೀದಿಸಿದ್ದಾರೆ.
ಚೀನಾದ ಮಕಾವೋ ನಗರದ ಹೃದಯಭಾಗದಲ್ಲಿ 1928ರಲ್ಲಿ ಉದ್ಘಾಟನೆಯಾಗಿದ್ದ ಈ ಹೋಟೆಲ್ಗೆ ರಾಜಕಾರಣಿಗಳು, ರಾಜತಾಂತ್ರಿಕರು, ಪ್ರಸಿದ್ಧ ವ್ಯಕ್ತಿಗಳಿಗೆ ಮಾತ್ರ ಪ್ರವೇಶವಿತ್ತು. ಮೂಲತಃ ಪ್ರೆಸಿಡೆಂಟ್ ಹೋಟೆಲ್ ಎಂದು ಕರೆಯಲ್ಪಡುವ ಹೋಟೆಲ್ ಸೆಂಟ್ರಲ್ ಪೋರ್ಚುಗಲ್ನ ಹೆಗ್ಗುರುತು ಎಂದೇ ಕರೆಯಲಾಗುತ್ತಿತ್ತು. ಇದು ಸೆಲೆಬ್ರಿಟಿಗಳ ನೆಚ್ಚಿನ ಸ್ಥಳ ಎನಿಸಿತ್ತು.
1932 ರಲ್ಲಿ, ಇದು ಎರಡು ಅಂತಸ್ತಿನ ಕ್ಯಾಸಿನೊವನ್ನು ಹೊಂದಿರುವ ಮಕಾವೊ ನಗರದ ಮೊದಲ ಹೋಟೆಲ್ ಅಂತ ಹೆಸರಾಯ್ತು. 1942 ರಲ್ಲಿ ಹನ್ನೊಂದು ಮಹಡಿಗಳಿಗೆ ಕಟ್ಟಡ ವಿಸ್ತರಿಸಲಾಯಿತು, ಇದು ಮಕಾವೊ ನಗರದ ಅತಿ ಎತ್ತರದ ಹೋಟೆಲ್ ಎಂದೇ ಪ್ರಸಿದ್ಧಿಯಾಯ್ತು.
ಇಂತಹ ಐಷಾರಾಮಿ ಹೋಟೆಲ್ ಇತ್ತೀಚೆಗೆ ಸ್ಪರ್ಧೆಯನ್ನು ಎದುರಿಸಲಾಗದೇ ತನ್ನ ಚಾರ್ಮ್ ಕಳೆದುಕೊಂಡಿತು. 1991ರಲ್ಲಿ ತನ್ನದೇ ಆದ ರಿಯಲ್ ಎಸ್ಟೇಟ್ ಕಂಪನಿ ಲೆಕ್ ಹ್ಯಾಂಗ್ ಗ್ರೂಪ್ ಸ್ಥಾಪಿಸಿದ್ದ ಸೈಮನ್ ಸಿಯೊ, ಮಾರುಕಟ್ಟೆಯಲ್ಲಿ ತನ್ನದೇ ಆದ ಅಧಿಪತ್ಯೆ ಸ್ಥಾಪಿಸಿದ್ದ. ಆದರೂ ಸೆಂಟ್ರಲ್ ಹೋಟೆಲ್ ಖರೀದಿಸುವ ಕನಸು ಕಾಣುವುದು ಮಾತ್ರ ಬಿಟ್ಟಿರಲಿಲ್ಲ.
ಈ ಅವಕಾಶ ಅಂತಿಮವಾಗಿ ಒದಗಿ ಬಂದಿತು. 2000 ನೇ ಇಸವಿಯಲ್ಲಿ ಆ ಹೋಟೆಲ್ನ ಇಬ್ಬರು ಮಾಲೀಕರು ಹೋಟೆಲ್ ಮಾರಾಟ ಮಾಡಲು ನಿರ್ಧರಿಸಿದ್ರು. ಸುದೀರ್ಘವಾದ ಸ್ವಾಧೀನ ಪ್ರಕ್ರಿಯೆ ಆರಂಭಿಸಿದ ಲೆಕ್ ಹ್ಯಾಂಗ್ ಗ್ರೂಪ್ 2016 ರಲ್ಲಿ ಸ್ವಾಧೀನ ಪ್ರಕ್ರಿಯೆ ಮುಕ್ತಾಯಗೊಳಿಸಿತು. ಹಾಗಂತ ಉದ್ಯಮಿ ಸಿಯೊ, ಆ ಹೋಟೆಲ್ ಅನ್ನು ಹಗೆತನದಿಂದ ಖರೀದಿಸಲಿಲ್ಲ. ಮಕಾವೊ ನಗರದ ಪರಂಪರೆಯನ್ನು ಪುನಃಸ್ಥಾಪಿಸಲು ಖರೀದಿಸಿದ್ದಾಗಿ ಹೇಳುತ್ತಾರೆ.
ಆ ಹೋಟೆಲ್ ಜೊತೆಗೆ ನಾನು ಆಳವಾದ ಭಾವನಾತ್ಮಕ ಬಾಂಧವ್ಯವನ್ನು ಹೊಂದಿದ್ದೆ. ಅದರ ಉತ್ತುಂಗದಲ್ಲಿದ್ದಾಗ ನನ್ನ ಪಾಲಿನ ಅದ್ಭುತವಾಗಿತ್ತು. ಅದು ಚಾರ್ಮ್ ಕಳೆದುಕೊಂಡಿದ್ದಕ್ಕೆ ನನ್ನ ಹೃದಯವನ್ನು ಕಲಕಿತು. ಅದಕ್ಕಾಗಿ ಖರೀದಿಸಿದೆ ಅಂತ ಸಂದರ್ಶನದಲ್ಲಿ ಸೈಮನ್ ಸಿಯೊ ಹೇಳಿದ್ದಾರೆ.
ಹೋಟೆಲ್ ಖರೀದಿ ಬಳಿಕ ಸೈಮನ್ ಸಿಯೊಗೆ ಮತ್ತೊಂದು ಸವಾಲು ಎದುರಾಯಿತು. ನವೀಕರಣಕ್ಕೆ ಅಂದಾಜು 2,310 ಕೋಟಿ ರೂಪಾಯಿಗಳ ಹೂಡಿಕೆಯ ಅಗತ್ಯವಿತ್ತು. ಅಲ್ಲದೇ 100 ವರ್ಷಗಳಷ್ಟು ಹಳೆಯದಾದ ಕಟ್ಟಡವನ್ನು ನವೀಕರಿಸುವುದು ಒಂದು ಸವಾಲಿನ ಪ್ರಯತ್ನವಾಗಿತ್ತು. ವಿಶೇಷವಾಗಿ 1930 ಮತ್ತು 1940ರ ದಶಕದಲ್ಲಿ ಹೋಟೆಲ್ ಸೆಂಟ್ರಲ್ಗೆ ಸೇರಿಸಲಾದ ಹೆಚ್ಚುವರಿ ಮಹಡಿಗಳು ಸರಿಯಾದ ಅಡಿಪಾಯ ಹೊಂದಿರಲಿಲ್ಲ. ಅಲ್ಲದೇ ಈ ಹೋಟೆಲ್ ಕಟ್ಟಡ ಮತ್ತು ಪಕ್ಕದ ಪ್ರದೇಶ ಸಾಂಸ್ಕೃತಿಕ ತಾಣವಾಗಿ ಯೂನೆಸ್ಕೋ ಪಟ್ಟಿಯಲ್ಲಿತ್ತು. ನಿಯಮದಂತೆ ಹೋಟೆಲ್ನ ರಚನೆ ಬದಲಾಯಿಸುವುದು, ಕೆಡವಲು ಸಾಧ್ಯವಿಲ್ಲ. ಹಲವು ಸಮಸ್ಯೆ ನಿವಾರಿಸಿದ ನಂತರ 2019ರಲ್ಲಿ ನವೀಕರಣ ಆರಂಭವಾಯಿತು. ಎಲ್ಲಾ ಅಡೆ ತಡೆ ಮೀರಿ ಸದ್ಯ ನವೀಕರಣಗೊಂಡಿರುವ ಸೆಂಟ್ರಲ್ ಹೋಟೆಲ್, 2022ರಲ್ಲಿ ಐಷಾರಾಮಿ ಹೋಟೆಲ್ಗಳಲ್ಲಿ ಅಗ್ರಸ್ಥಾನ ಪಡೆಯಿತು.
ಸೆಂಟ್ರಲ್ ಹೋಟೆಲ್ ನನ್ನ ಪಾಲಿಗೆ ಒಂದು ಉದ್ಯಮವಲ್ಲ. ಇದು ಮಕಾವೋ ಪರಂಪರೆಗೆ ಗೌರವದ ಸಂಕೇತ. ಮಕಾವೋ ಹೆಗ್ಗುರುತನ್ನು ಮರುಸ್ಥಾಪಿಸಿದ್ದೇನೆ ಎನ್ನುತ್ತಾರೆ ಸೈಮನ್ ಸಿಯೊ.