ಟೇಲರ್ ಒಬ್ಬರ ಜೀವನದಲ್ಲಿ ದಂಗಲ್ ಸಿನಿಮಾ ಸ್ಫೂರ್ತಿ ಆಗಿದ್ದು ಹೇಗೆ?
ತಂದೆ ತಾಯಿ ಹೆಮ್ಮೆ ಪಡುವಂತ ಕೆಲಸ ಮಾಡಿದ್ದಾರೆ ಈ ಹೆಣ್ಣು ಮಕ್ಕಳು
‘ನನ್ನ ಮಕ್ಕಳು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು‘ ತಂದೆ ಹೇಳಿದ್ದೇನು?
ಸಿನಿಮಾಗಳು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಅಂತ ಸಿನಿಮಾ ನೋಡದಂತೆ ಮಕ್ಕಳ ಮೇಲೆ ನಿಗಾ ವಹಿಸಿರುವ ಪೋಷಕರಿದ್ದಾರೆ. ಸಿನಿಮಾ ನೋಡಿ ಹಾಳಾದ ಅಂತ ಟೀಕೆ ಮಾಡೋದನ್ನೂ ನೋಡಿದ್ದೇವೆ. ಆದರೆ ಡಾ.ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಸಿನಿಮಾ ನೋಡಿ, ಎಷ್ಟೋ ಜನ ಸಿಟಿಯಲ್ಲಿನ ಕೆಲಸ ಬಿಟ್ಟು ಹಳ್ಳಿಗೆ ಹೋಗಿ ವ್ಯವಸಾಯ ಮಾಡಿ ಯಶಸ್ವಿ ಕಂಡಿದ್ದು ನೋಡಿದ್ದೇವೆ. ವಿಷ್ಣುವರ್ಧನ್ರ ಯಜಮಾನ ಸಿನಿಮಾ ನೋಡಿದ ಮೇಲೆ ಒಡೆದು ಹೋಗಿದ್ದ ಎಷ್ಟೋ ಕುಟುಂಬಗಳು ಒಂದಾಗಿದ್ದು ಕೇಳಿದ್ದೇವೆ. ಅಂತಹವರಿಗೆ ಸಿನಿಮಾಗಳು ನೀಡಿದ ಸ್ಫೂರ್ತಿ ಅಂತಲೇ ಹೇಳಬಹುದು.
ತೆಲಂಗಾಣದ ಸಿದ್ದಿಪೇಟೆಯ ಟೇಲರ್ ಒಬ್ಬರ ಜೀವನದಲ್ಲಿ ಅಮೀರ್ ಖಾನ್ರ ದಂಗಲ್ ಸಿನಿಮಾ ಬಹುದೊಡ್ಡ ಸ್ಪೂರ್ತಿ ನೀಡಿದೆ. ಸಿದ್ದಪೇಟೆಯ ಟೈಲರ್ ಕೆ.ರಾಮಚಂದ್ರಂ, ಅವರ ಪತ್ನಿ ಶಾರದಾಗೆ ಸಿನಿಮಾ ಹುಚ್ಚು. ಕುಟುಂಬ ಸಮೇತ ಅದೆಷ್ಟೋ ಸಿನಿಮಾಗಳನ್ನು ನೋಡಿದ್ದರು. ಆದರೆ ನೈಜ ಘಟನೆ ಆಧರಿಸಿದ ದಂಗಲ್ ಸಿನಿಮಾ ನೋಡಿದ ಮೇಲೆ ಟೈಲರ್ ರಾಮಚಂದ್ರಂ ಅವರ ಜೀವನ ಮತ್ತೊಂದು ಹಂತಕ್ಕೆ ಹೋಗಿದೆ.
ದಂಗಲ್ ಸಿನಿಮಾದಲ್ಲಿ ಕುಸ್ತಿಪಟು ಆಗಿದ್ದ ನಾಯಕ(ಅಮೀರ್ ಖಾನ್) ತನ್ನ ವೃತ್ತಿ ಜೀವನದಲ್ಲಿ ಹಿನ್ನಡೆ ಆದರೂ, ತನ್ನ ಮಕ್ಕಳ ಮೂಲಕ ಚಿನ್ನದ ಪದಕ ಗೆಲ್ಲುವ ಕನಸು ಕಾಣುವ ದೃಢ ನಿರ್ಧಾರದ ತಂದೆ. ತನ್ನ ದೇಶಕ್ಕಾಗಿ ಪದಕ ಗೆಲ್ಲಲಾಗಲಿಲ್ಲ ಎಂದು ಹತಾಶೆಯಿಂದ, ಮುಂದೆ ತನ್ನ ಮಗ ಪದಕ ಗೆಲ್ಲುತ್ತಾನೆ ಎಂದು ಪ್ರತಿಜ್ಞೆ ಮಾಡುತ್ತಾರೆ. ಆದರೆ ನಾಲ್ವರು ಹೆಣ್ಣು ಮಕ್ಕಳು ಜನಿಸಿದ್ದಕ್ಕೆ ನಿರಾಸೆಯಿಂದ ಭರವಸೆ ಕಳೆದುಕೊಳ್ಳುತ್ತಾನೆ. ಅದೊಂದು ದಿನ ಇಬ್ಬರು ಪುತ್ರಿಯರು, ಹೊರಗಡೆ ಹೋದಾಗ ಹುಡುಗರ ಅಸಭ್ಯ ಕಾಮೆಂಟ್ಗಳಿಗೆ ಪ್ರತಿಯಾಗಿ ಇಬ್ಬರು ಹುಡುಗರನ್ನು ಹೊಡೆದು ಮನೆಗೆ ಬಂದಾಗ ಅವರಲ್ಲಿ ಕುಸ್ತಿಪಟುಗಳಾಗುವ ಸಾಮರ್ಥ್ಯ ಅರಿತುಕೊಳ್ಳುತ್ತಾನೆ. ಅಂದಿನಿಂದ ಅವರಿಗೆ ತರಬೇತಿ ನೀಡಿ ಹಿರಿಯ ಮಗಳು 2010ರಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದಾಗ ಅವನ ಕನಸು ನನಸಾಗುತ್ತದೆ.
ದಂಗಲ್ ಸಿನಿಮಾ ನೋಡಿ ಮನೆಗೆ ಬಂದ ರಾಮಚಂದ್ರಂ ಅವರಿಗೆ, ತಾನು ಹೆಚ್ಚು ಓದದಿದ್ದರೂ ತನ್ನ ನಾಲ್ವರು ಹೆಣ್ಣು ಮಕ್ಕಳೂ ಏನಾದರೂ ದೊಡ್ಡ ಸಾಧನೆ ಮಾಡಲಿ ಅಂತ ಬಯಸಿದ್ದರಂತೆ. ಈ ಸಮಾಜಕ್ಕೆ ಸೇವೆ ಸಲ್ಲಿಸಬೇಕು, ತಮ್ಮ ಮಕ್ಕಳು ವೈದ್ಯರಾಗಿ ಸಮಾಜ ಸೇವೆ ಮಾಡಲಿ ಅಂತ ಬಯಸಿದ್ದರಂತೆ. ಆದರೆ ಟೈಲರಿಂಗ್‌ನಿಂದ ಬರುತ್ತಿದ್ದ ತಿಂಗಳ ಆದಾಯ 20 ರಿಂದ 25,000 ರೂ. ಆದರೂ ತಮ್ಮ ಕನಸು ಮಕ್ಕಳನ್ನು ಓದಿಸುವ ಛಲ ತೊಟ್ಟ ರಾಮಚಂದ್ರಂ ತನ್ನ ಮನೆಯನ್ನೇ ಅಡವಿಟ್ಟು, ಸಾಲ ಪಡೆದು ಮಕ್ಕಳನ್ನು ವೈದ್ಯಕೀಯ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ರಾಮಚಂದ್ರಂ-ಶಾರದಾ ದಂಪತಿಯ ಶ್ರಮ ಫಲ ನೀಡುತ್ತಿದೆ.
ಹಿರಿಯ ಮಗಳು ಎಂಬಿಬಿಎಸ್ ಮುಗಿಸಿ ಸ್ನಾತಕೋತ್ತರ ಅಧ್ಯಯನಕ್ಕೆ ತಯಾರಿ ನಡೆಸುತ್ತಿದ್ದರೆ, 2ನೇ ಮಗಳು ಮಾಧುರಿ, ಎಂಬಿಬಿಎಸ್ ಮೂರನೇ ವರ್ಷದಲ್ಲಿ ಓದುತ್ತಿದ್ದಾಳೆ. ತಂದೆಯ ಸಂಕಷ್ಟ ನೋಡಿ ದಂಪತಿಯ ಅವಳಿ ಮಕ್ಕಳಾದ ರೋಹಿಣಿ, ರೋಷಿಣಿ ಇಬ್ಬರೂ, ತಂದೆಯ ಆರ್ಥಿಕ ಹೊರೆ ಕಡಿಮೆ ಮಾಡಲು ಇಂಜಿನಿಯರಿಂಗ್ ಓದಲು ನಿರ್ಧರಿಸಿದ್ದರು. ಆದರೆ ರಾಮಚಂದ್ರಂ, ಉಳಿದ ಇಬ್ಬರು ಮಕ್ಕಳಿಗೂ ಅವರ ಅಕ್ಕಂದಿರಂತೆ ವೈದ್ಯಕೀಯ ಅಧ್ಯಯನಕ್ಕೆ ಪ್ರೋತ್ಸಾಹಿಸಿದ್ರು. ಅದರ ಪರಿಣಾಮ ಈ ವರ್ಷ ರೋಹಿಣಿ, ರೋಷಿಣಿ ಇಬ್ಬರೂ ಜಗ್ತಿಯಾಲ್ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಉಚಿತ ಸೀಟು ಪಡೆದಿದ್ದಾರೆ.
‘ಐಎಎಸ್, ಐಪಿಎಸ್ನಂತಹ ವೃತ್ತಿಗಳು ಆಡಳಿತಾತ್ಮಕವಾಗಿ ಉನ್ನತ ಎನಿಸಿದ್ರೂ ಸಮಾಜದಲ್ಲಿ ವೈದ್ಯರಿಗೆ ವಿಭಿನ್ನವಾದ ಸ್ವಾತಂತ್ರ್ಯವಿದೆ. ಸಮಾಜದಲ್ಲಿ ವೈದ್ಯರೆಂದರೆ ಅತ್ಯಂತ ವಿಶೇಷ. ಐಎಎಸ್ ಮತ್ತು ಐಪಿಎಸ್ ಅದಿಕಾರಿಗಳು ಕೂಡ ಜನರಿಗಾಗಿ ಸೇವೆ ಸಲ್ಲಿಸುತ್ತಾರೆ. ಆದರೆ ಅವರು ಶಾಸಕರು, ಮಂತ್ರಿಗಳು, ಇತರ ಅಧಿಕಾರಗಳ ಮುಂದೆ ತಲೆಬಾಗಬೇಕು. ಹಾಗಾಗಿ ನನ್ನ ಮಕ್ಕಳು ವೈದ್ಯರಾಗಿ, ಸ್ವಾವಲಂಬನೆಯಿಂದ ಸ್ವತಂತ್ರವಾಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಾರೆ’ ಅಂತಾರೆ ಟೈಲರ್ ರಾಮಚಂದ್ರಂ.
ಎಲ್ಲಾ ನಾಲ್ವರು ಹೆಣ್ಣು ಮಕ್ಕಳು ತಮ್ಮ ವೈದ್ಯಕೀಯ ಶಿಕ್ಷಣ ಮುಗಿಸಿ, ಸರ್ಕಾರಿ ಕೆಲಸ ಸಿಗದಿದ್ದರೂ, ತಮ್ಮ ಸ್ವಂತ ಕ್ಲಿನಿಕ್ ತೆಗೆದು ಸೇವೆ ಮಾಡಲಿ ಅಂತಾರೆ ರಾಮಚಂದ್ರಂ. ಮಕ್ಕಳನ್ನು ಓದಿಸಲು ಎಷ್ಟೇ ಖರ್ಚಾದರೂ ಪರವಾಗಿಲ್ಲ. ಅವರನ್ನು ವೈದ್ಯರನ್ನಾಗಿ ಮಾಡುವೆ ಎನ್ನುತ್ತಾರೆ ರಾಮಚಂದ್ರಂ. ತಂದೆಯ ಕನಸು ನನಸು ಮಾಡುತ್ತೇವೆ ಅಂತ ಅವರ ನಾಲ್ವರು ಹೆಣ್ಣು ಮಕ್ಕಳೂ ಸಂಕಲ್ಪ ತೊಟ್ಟಿದ್ದಾರೆ. ತಂದೆ-ತಾಯಿ ಇಬ್ಬರೂ ನಮ್ಮನ್ನು ವೈದ್ಯರನ್ನಾಗಿ ಮಾಡಲು ಪ್ರೋತ್ಸಾಹ ನೀಡಿದ್ದಾರೆ. ನಮಗಾಗಿ ಕಷ್ಟಪಟ್ಟಿದ್ದಾರೆ. ನಾವು ಖರ್ಚು-ವೆಚ್ಚದ ಬಗ್ಗೆ ಚಿಂತಿಸಿದಾಗಲೂ, ಅದನ್ನೆಲ್ಲ ಬಿಟ್ಟು ನಮ್ಮನ್ನು ಬೆಂಬಲಿಸಿದ್ದಾರೆ. ನಮ್ಮ ಪೋಷಕರ ಬಗ್ಗೆ ಹೆಮ್ಮೆ ಇದೆ, ಅವರ ಕನಸು ನನಸು ಮಾಡುತ್ತೇವೆ ಅಂತಾರೆ ಅವರ ಮಕ್ಕಳು.