ಟೈಮ್​ ಪಾಸ್​ಗಾಗಿ ಲೂಡೋ ಆಡ್ತಾ ಇದ್ದೀರಾ; ಹಾಗಾದ್ರೆ ಈ ಸ್ಟೋರಿ ನೀವು ಓದಲೇಬೇಕು

  • ಆನ್​ಲೈನ್​ ಗೀಳಿಗೆ ಬಿದ್ದು ಸಾವಿನ ಮನೆ ಸೇರಿದ್ದಾಳೆ ಈ ಮಹಿಳೆ
  • ಟೈಮ್​ ಪಾಸ್​ ಆಗ್ತಿಲ್ಲ ಅಂತ ಗೇಮ್​ ಆಡುವವರೇ ಈ ಸ್ಟೋರಿ ಓದಿ
  • ಉಧಮಸಿಂಗ್ ನಗರದ ಬಾಜ್‌ಪುರ ನಿವಾಸಿಗೆ ಆಗಿದ್ದೇನು ಗೊತ್ತಾ?

ಈಗಂತೂ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರ ಕೈಯಲ್ಲೂ ಫೋನ್ ಇದ್ದೇ ಇರುತ್ತೆ. ಯಾರು ಯಾವಾಗ ಫೋನ್​ನಲ್ಲಿ ಏನೆಲ್ಲಾ ಮಾಡ್ತಾ ಇರ್ತಾರೆ ಅಂತ ಹೇಳೋದಕ್ಕೆ ಕಷ್ಟ. ಆದರೆ ನಮ್ಮ ಬುದ್ಧಿ ಕೈಯಲ್ಲಿ ಇಲ್ಲದಿದ್ದಾಗ ಇಂತಹ ದುರಂತಗಳು ನಡೆದು ಹೋಗುವುದಕ್ಕೆ ಈ ಘಟನೆಯೇ ಸಾಕ್ಷಿ.

ಟೈಮ್​ ಪಾಸ್​ ಆಗ್ತಿಲ್ಲ ಏನ್​ ಮಾಡೋದು ಅಂತ ಯೋಚನೆ ಮಾಡ್ತಾ ಇದ್ದಾಗ ಅವರ ತಲೆಗೆ ಮೊದಲು ಬರುವುದೇ ಲುಡೋ ಗೇಮ್​. ಮೆಟ್ರೋ, ಬಸ್, ರೈಲು ಅಷ್ಟೇ ಯಾಕೆ ಕುಲುಕುತ್ತಲೇ ಫೋನ್​ ಹಿಡಿದುಕೊಂಡು ಯುವಕ ಯುವತಿಯರು ಲುಡೋನಂತಹ ಆನ್​ಲೈನ್​ ಗೇಮ್​ನಲ್ಲಿ ಆಟ ಮಾಡುತ್ತ ತಮ್ಮ ದಿನವನ್ನು ಕಳೆಯುತ್ತಾರೆ.

ಆನ್‌ಲೈನ್‌ನಲ್ಲಿ ಆಡುವ ಗೇಮ್​ಗೆ ಸಿಲುಕಿ ಸಾಕಷ್ಟು ಮಂದಿ ಹಣ, ಮನೆ ಹಾಗೂ ಆಸ್ತಿ ಪಾಸ್ತಿಯನ್ನು ಕಳೆದುಕೊಂಡು ಬೀದಿಗೆ ಬಂದಿರೋ ಸಾಕಷ್ಟು ಉದಾಹರಣೆಗಳಿವೆ. ಇದಲ್ಲದೆ ಸಾಲದ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುವವರು ಇದ್ದಾರೆ. ಹೀಗೆ ಮಹಿಳೆಯೊಬ್ಬಳು ಇದೇ ಲುಡೋ ಗೇಮ್​ ಆಡಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಲುಡೋ ಗೇಮ್‌ನಲ್ಲಿ 50 ಸಾವಿರ ರೂ. ಹಣ ಕಳೆದುಕೊಂಡ ಮಹಿಳೆಯೊಬ್ಬಳು ಸಾವಿಗೆ ಶರಣಾಗಿದ್ದಾಳೆ. ಪಲ್ಲವಿ ಶರ್ಮಾ (25) ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ಮೃತ ಮಹಿಳೆ ಉತ್ತರಾಖಂಡದ ಉಧಮಸಿಂಗ್ ನಗರದ ಬಾಜ್‌ಪುರ ನಿವಾಸಿಯಾಗಿದ್ದಾಳೆ. ಹೀಗೆ ಮೃತ ಪಲ್ಲವಿ ಆನ್‌ಲೈನ್ ಚಟಕ್ಕೆ ಬಿದ್ದಿದ್ದಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಪಲ್ಲವಿ ಆನ್‌ಲೈನ್‌ನಲ್ಲಿ ಲುಡೋ ಗೇಮ್​ನಲ್ಲಿ 10,000 ರೂ. ಕಳೆದುಕೊಂಡಿದ್ದರಂತೆ. ಇದರಿಂದ ಭಯಪಟ್ಟು ಲುಡೋ ಆಡುವುದನ್ನೇ ಬಿಟ್ಟಿದ್ದರು. ಆದರೆ ಕೆಲವು ದಿನಗಳ ನಂತರ ಮತ್ತೆ ಪಲ್ಲವಿ ಆಟವಾಡಲು ಶುರುಮಾಡಿದ್ದರು.

ಮತ್ತೆ ಅದೇ ಲುಡೋದಲ್ಲಿ 40 ಸಾವಿರ ರೂ. ಹಣ ಕಳೆದುಕೊಂಡಿದ್ದಾಳಂತೆ. ಇದರಿಂದ ಬೇಸರಗೊಂಡ ಮಹಿಳೆ ಪತಿಗೆ ಕರೆ ಮಾಡಿ ಇನ್ನು ಮುಂದೆ ನಾನು ಬದುಕುವುದಿಲ್ಲ ಅಂತ ಅತ್ತಿದ್ದಾಳಂತೆ. ಆಗ ಪತಿ ಫೋನ್​ನಲ್ಲೇ ಆಕೆಯನ್ನು ಸಮಾಧಾನಪಡಿಸಿ ಆ ಕೂಡಲೇ ಮನೆಗೆ ಬಂದಿದ್ದಾನೆ. ಆದರೆ ಅಷ್ಟೋತ್ತಿಗೆ ಪಲ್ಲವಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈ ಘಟನೆ ಸಂಬಂಧ ಪೊಲೀಸರು ಕೇಸ್​ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

TOP