- ತುಮಕೂರು ಪೊಲೀಸರು ಭರ್ಜರಿ ಕಾರ್ಯಾಚರಣೆ
- ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ
- ತಮಿಳುನಾಡು, ದೊಡ್ಡಬಳ್ಳಾಪುರ ಸೇರಿ ಎಲ್ಲಿಂದ ಎಲ್ಲಿಗೆ ನಂಟು?
ತುಮಕೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಓರ್ವ ಕಿಲಾಡಿ ಬೈಕ್ ಕಳ್ಳನನ್ನು ಬಂಧಿಸಿ ಬೆಚ್ಚಿಬಿದ್ದಿದ್ದಾರೆ. ಮುಬಾರಕ್ ಖಾನ್ ಅಲಿಯಾಸ್ ಮಟನ್ ಮುಬಾರಕ್ (53) ಬಂಧಿತ ಆರೋಪಿ.
ಜಾತ್ರೆ, ಸಂತೆ, ಮಾರ್ಕೆಟ್ಗಳನ್ನೇ ಪ್ರಮುಖ ಟಾರ್ಗೆಟ್ ಮಾಡುತ್ತಿದ್ದ ಈತ, ನಕಲಿ ಕೀ ಬಳಸಿ ಕ್ಷಣಾರ್ಧದಲ್ಲಿ ಬೈಕ್ಗಳನ್ನು ಎಗರಿಸುತ್ತಿದ್ದ. ಹಿರೋ ಕಂಪನಿಯ ಸೂಪರ್ ಸ್ಪೆಂಡರ್, ಪ್ಯಾಶನ್ ಪ್ರೋ ಬೈಕ್ಗಳನ್ನೇ ಹೆಚ್ಚಾಗಿ ಕದಿಯುತ್ತಿದ್ದ. ಬೈಕ್ ಕಳ್ಳನ ಬೆನ್ನು ಬಿದ್ದಿದ್ದ ಪೊಲೀಸರು, ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷ ಅಂದರೆ ಈತನ ಬಳಿಯಿದ್ದ ಬರೋಬ್ಬರಿ 42 ಬೈಕ್ಗಳನ್ನು ಸೀಜ್ ಮಾಡಿದ್ದಾರೆ. ಮೇಲಿನ ಫೋಟೋವೇ ಕಳ್ಳತನದ ಅಸಲಿ ಕತೆಯನ್ನು ಹೇಳುತ್ತಿದೆ.
21,60,000 ರೂಪಾಯಿ ಬೆಲೆ ಬಾಳುವ 42 ಬೈಕ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮುಬಾರಕ್ ಖಾನ್ ಅಲಿಯಾಸ್ ಮಟನ್ ಮುಬಾರಕ್ ಮೂಲತಃ ಚಿಕ್ಕಬಳ್ಳಾಪುರದ ಶಿಡ್ಲಘಟ್ಟದವ ಎಂದು ತಿಳಿದುಬಂದಿದೆ. ಯಾವಾಗಲೂ 40, 50 ನಕಲಿ ಬೈಕ್ ಕೀಗಳನ್ನು ಇಟ್ಟುಕೊಳ್ಳುತ್ತಿದ್ದ. ಹಿರೋ ಕಂಪನಿಯ ಬೈಕ್ಗಳು ಕಂಡರೆ ನಕಲಿ ಕೀ ಮೂಲಕ ಕ್ಷಣಾರ್ಧದಲ್ಲಿ ಕದಿಯುತ್ತಿದ್ದ.
ಸಿಕ್ಕಿಬಿದ್ದಿದ್ದು ಹೇಗೆ..?
ತುಮಕೂರಿನ ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಬೈಕ್ ಕಳವು ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಮುಬಾರಕ್ ಸಿಕ್ಕಿಬಿದ್ದಿದ್ದ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 42 ಬೈಕ್ಗಳು ಪತ್ತೆಯಾಗಿವೆ. ಅವುಗಳಲ್ಲಿ 15 ಬೈಕ್ಗಳ ಕಳ್ಳತನದ ಬಗ್ಗೆ ದೂರು ದಾಖಲಾಗಿದ್ರೆ, 27 ಬೈಕ್ಗಳ ಮೇಲೆ ಯಾವುದೇ ದೂರು ದಾಖಲಾಗಿಲ್ಲ.
ಎಲ್ಲೆಲ್ಲಿ ದೂರು..?
ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2, ತುಮಕೂರು ನಗರ ಠಾಣೆ 3, ಪಾವಗಡ ಠಾಣೆ 1, ನೆಲಮಂಗಲ ಠಾಣೆ 1, ದೊಡ್ಡಬಳ್ಳಾಪುರ ಠಾಣೆ 1, ಬೆಂಗಳೂರು ರೈಲ್ವೆ ಠಾಣೆ 1, ಶ್ರೀನಿವಾಸಪುರ ಠಾಣೆ 2, ಯಲಹಂಕ ಪೊಲೀಸ್ ಠಾಣೆ 1, ಬಾಗೆಪಲ್ಲಿ ಠಾಣೆ 1, ಆಂಧ್ರ ಪ್ರದೇಶದ ಕುಪ್ಪಂ ಠಾಣೆ 1, ರಾಬರ್ಟ್ ಸನ್ ಪೇಟೆ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ 1 ಪ್ರಕರಣದಲ್ಲಿ ಈತ ಕದ್ದ ಬೈಕ್ ಪತ್ತೆಯಾಗಿದೆ.